ಪೆಸಿಫಿಕ್ ದ್ವೀಪಗಳು - 
ಸ್ಥೂಲವಾಗಿ ಪೆಸಿಫಿಕ್ ಸಾಗರದ ಎಲ್ಲ ದ್ವೀಪಗಳು. ಹೆಚ್ಚು ಖಚಿತವಾಗಿ ಹೇಳುವುದಾದರೆ, ಮೆಲನೇಷಿಯ. ಮೈಕ್ರೋನೇಷಿಯ ಮತ್ತು ಪಾಲನೇಷಿಯ ದ್ವೀಪಗಳು. ಉ.ಅ. 120- ದ.ಅ.250 ಮತ್ತು ಪೂ.ರೇ. 1300-ಪ.ರೇ. 1300 ನಡುವೆ ಇರುವ ದ್ವೀಪಗಳನ್ನು - ಉತ್ತರದಲ್ಲಿ ಹಬ್ಬಿರುವ ಮೆರಿಯಾನ ದ್ವೀಪಗಳು, ಕರ್ಕಾಟಕ ವೃತ್ತದ ಮೇಲೆ ಈಶಾನ್ಯದಲ್ಲಿರುವ ಹವಾಯೀ ದ್ವೀಪಗಳು, ದಕ್ಷಿಣದಲ್ಲಿರುವ ನ್ಯೂಜಿûಲೆಂಡ್, ಆಗ್ನೇಯದಲ್ಲಿ ದೂರದಲ್ಲಿರುವ ಈಸ್ಟರ್ ದ್ವೀಪಗಳು ಇವನ್ನು ಬಿಟ್ಟು - ನಿರ್ದಿಷ್ಟಾರ್ಥದಲ್ಲಿ ಪೆಸಿಫಿಕ್ ದ್ವೀಪಗಳೆಂದು ಕರೆಯಲಾಗಿದೆ. ಇಲ್ಲಿ ಸುಮಾರು 10,000 ದ್ವೀಪಗಳಿವೆ. ಇವುಗಳ ನೆಲದ ಒಟ್ಟು ವಿಸ್ತೀರ್ಣ 13,00,000 ಚ.ಕಿ.ಮೀ. 

ಪೆಸೆಫಿಕ್ ದ್ವೀಪಗಳನ್ನು ಜನಾಂಗೀಯವಾಗಿ ಮೂರು ಗುಂಪುಗಳಾಗಿ ವಿಭಾಗ ಮಾಡುವುದು ವಾಡಿಕೆಯಾಗಿದೆ. ಅವು ಮೆಲನೇಷಿಯ, ಮೈಕ್ರೊನೇಷಿಯ ಮತ್ತು ಪಾಲಿನೇಷಿಯ. ಮೆಲನೇಷಿಯ ಎಂಬ ಹೆಸರು ಕಪ್ಪು ದ್ವೀಪ ಎಂಬ ಅರ್ಥದ ಗ್ರೀಕ್ ಪದದಿಂದ ಬಂದ್ದು. ಅಲ್ಲಿ ಕಪ್ಪು ಬಣ್ಣ ಜನರು ವಾಸಿಸುವುದರಿಂದ ಈ ಹೆಸರು ಬಂದಿದೆ. ಆಸ್ಟ್ರೇಲಿಯದ ಉತ್ತರ ಮತ್ತು ಪೂರ್ವಕ್ಕೆ ಸಮಭಾಜಕಕ ವೃತ್ತದ ದಕ್ಷಿಣಕ್ಕೆ ಹಬ್ಬಿರುವ ದ್ವೀಪಗಳ ಮಹಾವೃತ್ತವೇ ಮೆಲನೇಷಿಯ. ನ್ಯೂ ಗಿನಿ, ಬಿಸ್ಮಾರ್ಕ್, ಸಾಲೊಮನ್ಸ್, ನ್ಯೂ ಹೆಬ್ರಿಡಸ್, ನ್ಯೂ ಕ್ಯಾಲೆಡೋನಿಯ ಮತ್ತು ಫಿಜಿ ದ್ವೀಪಗಳು ಇದರಲ್ಲಿ ಸೇರಿವೆ. ಸಮಭಾಜಕ ವೃತ್ತಕ್ಕೆ ಉತ್ತರದಲ್ಲಿ ಫಿಲಿಪೀನ್ಸ್‍ನ ಪೂರ್ವಕ್ಕೆ ಇರುವ ದ್ವೀಪಗಳ ಮಾಲೆ ಮೈಕ್ರೊನೇಷಿಯ. ಇವು ಸಣ್ಣಗಾಗಿರುವುದರಿಂದ ಈ ಹೆಸರು ಬಂದಿದೆ. ಪಲಾವು, ಮೇರಿಯಾನ, ಕ್ಯಾರಲೀನ್ಸ್, ಮಾರ್ಷಲ್ ಮುಂತಾದ ದ್ವೀಪಗಳು ಈ ಗುಂಪಿಗೆ ಸೇರಿವೆ. ಇಲ್ಲಿಯ ನಿವಾಸಿಗಳು ತಾಮ್ರ ಬಣ್ಣದವರಾಗಿದ್ದು ಮುಂಗೊಲಾಯ್ಡ್ ಜನಾಂಗದವರನ್ನು ಹೋಲುತ್ತಾರೆ. ಪಾಲಿನೇಷಿಯ ಎಂದರೆ ಹಲವು ದ್ವೀಪಗಳು. ಇವು ಮಧ್ಯ ಪೆಸಿಫಿಕ್‍ನಲ್ಲಿ - ಉತ್ತರದ ಹವಾಯಿ ದಕ್ಷಿಣದ ನ್ಯೂಜಿûಲೆಂಡ್, ಪೂರ್ವದ ಈಸ್ಟರ್ ಇವುಗಳಿಂದಾದ ಬೃಹತ್ ತ್ರಿಕೋಣದ ನಡುವೆ - ಹರಡಿವೆ. ಸಮೋವ, ಟಾಂಗ, ಸೊಸೈಟಿ, ಟವುಮೋಟೊ, ಮಾರ್ಕೇಸಸ್ ಮತ್ತು ಕುಕ್ ಇವು ಈ ವಿಸ್ತøತ ಜಲಪ್ರದೇಶದ ಇತರ ದ್ವೀಪಗಳು.

ಈ ಮೂರೂ ವಿಭಾಗಗಳ ಜನರ ನಾಗರಿಕತೆ, ಸಮಾಜ ಪದ್ಧತಿ ಮುಂತಾದವು ಬೇರೆಬೇರೆಯಾಗಿವೆ. ಮೆಲನೇಷಿಯದವರು ನೀಗ್ರೋ ಬುಡಕಟ್ಟುಗಳವರು. ಪಾಲಿನೇಷಿಯನರು ಮೆಲನೇಷಿಯನರಿಗಿಂತ ಮುಂದುವರಿದವರು. ಇಲ್ಲಿಯ ಜನರು ಎತ್ತರವಾಗಿ ಗಟ್ಟಿಮುಟ್ಟಾದವರು. ಇವರು ಒಳ್ಳೆಯ ನಾವಿಕರು. ಮೈಕ್ರೋನೇಷಿಯದ ಜನರು ಕುಳ್ಳರು, ಕಂದು ಬಣ್ಣದವರು.
ಪೆಸಿಫಿಕ್ ದ್ವೀಪಗಳ ಭೌತಿಕ ಹಾಗೂ ಜೈವಿಕ ಪರಿಸರ ಅತ್ಯಂತ ವೈವಿಧ್ಯಮಯವಾದ್ದು. ಸಾಮಾಜಿಕ ಹಾಗೂ ಸಾಂಸ್ಕøತಿಕ ಅಧ್ಯಯನ ನಡೆಸುವವರಿಗೆ ಇವು ಇಂದಿಗೂ ಪ್ರಯೋಗ ಮಂದಿರಗಳಾಗಿವೆ. ಈ ದ್ವೀಪಗಳನ್ನು ಖಂಡೀಯ ಹಾಗೂ ಸಾಗರಿಕ ಎಂದು ಸ್ಥೂಲವಾಗಿ ವಿಂಗಡಿಸಬಹುದು. ಇವುಗಳ ವಾಯುಗುಣಗಳಲ್ಲೂ ವ್ಯತ್ಯಾಸಗಳಿವೆ.
ಇತಿಹಾಸ : ಪೆಸಿಫಿಕ್ ದ್ವೀಪಗಳ ಆಧುನಿಕ ಇತಿಹಾಸ 16 ನೆಯ ಶತಮಾನದಲ್ಲಿ ಆರಂಭವಾಯಿತು. ಅಲ್ಲಿಂದ 18 ನೆಯ ಶತಮಾನದವರೆಗೂ ಇವನ್ನು ಯೂರೋಪಿಯನ್ನರು ಒಂದಾದ ಮೇಲೊಂದರಂತೆ ಆಕ್ರಮಿಸಿದರು. ಅಲ್ಲದೆ, ಈ ದ್ವೀಪಗಳೊಂದಿಗೆ ಹೆಚ್ಚು ಹೆಚ್ಚಾಗಿ ವ್ಯಾಪಾರ ಬೆಳೆಸಿದರು. ತಮಗೆ ಅನುಕೂಲವಾಗುವ ರೀತಿಯಲ್ಲಿ ಇವುಗಳ ಆರ್ಥಿಕ ಬೆಳವಣಿಗೆಯ ಕಡೆಗೆ ಲಕ್ಷ್ಯ ಕೊಟ್ಟರು.

ಪೆಸಿಫಿಕ್ ಸಾಗರವನ್ನು ಮೊದಲ ಬಾರಿ ದಾಟಿದವನು (1521) ಯೂರೋಪಿನ ಫರ್ಡಿನೆಂಡ್ ಮೆಜಲಿನ್ ಎಂಬ ಪೋರ್ಚುಗೀಸ್ ನಾವಿಕ. ಅವನು ದಕ್ಷಿಣ ಅಮೆರಿಕದ ಕೆಳತುದಿಯನ್ನು ದಾಟಿ ಮೇರಿಯಾನ ದ್ವೀಪಗಳನ್ನು ಮುಟ್ಟಿದ. ಅಲ್ಲಿಂದ ಫಿಲಿಫೀನ್ಸ್ ಕಡೆಗೆ ಹೋದಾಗ ಅಲ್ಲಿಯ ನಿವಾಸಿಗಳು ಅವನನ್ನು ಕೊಂದರು. ಹದಿನಾರನೆಯ ಶತಮಾನದ ಅಂತ್ಯದಲ್ಲಿ ಸ್ಪೇನಿನ ಅಲ್ವಾರೋ ಮೆಂಡಾನ್ಯಾ ಎಂಬುವನು ಪೆರುವಿನಿಂದ ಹೊರಟು ಸಾಲೊಮನ್ ದ್ವೀಪಗಳನ್ನು ಮುಟ್ಟಿದ. ಆತ ಎರಡನೆಯ ಬಾರಿ (1595-96) ತನ್ನ ಪ್ರವಾಸವನ್ನು ಮುಂದುವರಿಸಿ ಮಾರ್ಗೇಸಸ್ ಮತ್ತು ಸಾಂತಕ್ರೂಜ್ ದ್ವೀಪಗಳನ್ನು ಕಂಡ. ಡಚ್ ಪ್ರವಾಸಿ ಯಾಕಪ್ ರೊಗ್ಗೆವೀನ್ (1721-22) ಪೆಸಿಫಿಕ್ ಸಾಗರವನ್ನು ಪೂರ್ವದಿಂದ ಪಶ್ಚಿಮದ ಕಡೆಗೆ ದಾಟುವಾಗ ಈಸ್ಟರ್ ದ್ವೀಪಗಳನ್ನು ಕಂಡ.
ಹದಿನೆಂಟನೆಯ ಶತಮಾನದ ಕೊನೆಗೆ ಹಲವಾರು ರಾಷ್ಟ್ರಗಳ ಪರಿಶೋಧಕರು ಪೆಸಿಫಿಕ್ ಸಾಗರವನ್ನು ಶೋಧಿಸಲು ಪ್ರಾರಂಭಿಸಿದರು. ಫ್ರಾನ್ಸಿನ ಲೂಯಿ ಆಂಟ್ವೇನ್ ಎಂಬವನು ಸೊಸೈಟಿ, ಸಮೋಮಾನ್ಯೂ ಗಿನಿಯ ದಕ್ಷಿಣದ ಭಾಗ ಮುಂತಾದವನ್ನು ಕಂಡ. ಬ್ರಿಟಿಷ್ ನಾವಿಕ ಜೇಮ್ಸ್ ಕುಕ್ ಪೆಸಿಫಿಕ್ ಸಾಗರಕ್ಕೆ ಮೂರು ಸಲ ಪ್ರವಾಸ ಮಾಡಿದ (1769, 1773-74, 1777-78).

ಪಾಶ್ಚಾತ್ಯ ವ್ಯಾಪಾರದವರು ಈ ದ್ವೀಪಗಳನ್ನು ಸೂರೆ ಮಾಡಿದರು. ಬಿಳಿಯ ಜನರು ಇಲ್ಲಿ ನೆಲೆಸಲೂ ಪ್ರಾರಂಭಿಸಿದರು. ದೇಶಾಂತರ ಹೋದ ನಾವಿಕರು ಮತ್ತು ಕೈದಿಗಳೇ ಇಲ್ಲಿಯ ವಲಸೆಗಾರರಲ್ಲಿ ಮೊದಲಿಗರು. ಇವರು ಈ ದ್ವೀಪಗಳ ನಿವಾಸಿಗಳಿಗೆ ಅನೇಕ ಬಗೆಯ ಕಿರುಕುಳಗಳನ್ನು ನೀಡಿದರು. ನಾವಿಕರು ಇಲ್ಲಿಯ ನಿವಾಸಿಗಳನ್ನು ಬಲಾತ್ಕಾರದಿಂದ ತಮ್ಮ ದೇಶಕ್ಕೆ ಒಯ್ಯುತ್ತಿದ್ದರು. ಪಾದ್ರಿಗಳೂ ಇಲ್ಲಿ ಜನರ ಮತಪರಿವರ್ತನೆಗಾಗಿ ಬರಲಾರಂಭಿಸಿದರು. ಕ್ರಮೇಣ ಇಲ್ಲಿ ವ್ಯವಸ್ಥೆ ನೆಲಸಿತು. ವಿವಿಧ ಬುಡಕಟ್ಟುಗಳ ಮೂಲ ನಿವಾಸಿಗಳಲ್ಲಿ ನಡೆಯುತ್ತಿದ್ದ ಯುದ್ಧವನ್ನು ತಡೆಗಟ್ಟಲು ಹಲವು ಸಂಸ್ಥೆಗಳು ಉದ್ಯುಕ್ತವಾದವು.
ಹತ್ತೊಂಬತ್ತನೆಯ ಶತಮಾನದಲ್ಲಿ ಪೆಸಿಫಿಕ್ ದ್ವೀಪಗಳ ಒಡೆತನ ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಅಮೆರಿಕಗಳ ನಡುವೆ ಹಂಚಿ ಹೋಗಿ ಅವುಗಳ ಪ್ರಭಾವಕ್ಕೆ ಒಳಗಾದವು. ಫ್ರಾನ್ಸ್ 1842 ರಲ್ಲಿ ಮಾರ್ಕೆಸಸ್ ದ್ವೀಪಗಳನ್ನು ವಶಪಡಿಸಿಕೊಂಡು ಅನಂತರ ನ್ಯೂ ಕ್ಯಾಲೆಡೋನಿಯ ತಹೀತಿ ಮತ್ತು ಪೂರ್ವ ಪಾಲಿನೇಷಿಯಕ್ಕೆ ತಾಗಿರುವ ಕೆಲವು ದ್ವೀಪಗಳಿಗೂ ತನ್ನ ಅಧಿಕಾರವನ್ನು ಚಾಚಿತು. 184 ರಲ್ಲಿ ಬ್ರಿಟನ್ ಫೀಜಿ ದ್ವೀಪಗಳನ್ನು ಸೇರಿಸಿಕೊಂಡಿತು. 1898 ರಲ್ಲಿ ಅಮೆರಿಕ ವಾಣಿಜ್ಯ ಮತ್ತು ಮತಪ್ರಚಾರಗಳ ಉದ್ದೇಶದಿಂದ ಹವೈಯಿಯನ್ನು ಆಕ್ರಮಿಸಿಕೊಂಡಿತು. ಸ್ಪೇನಿನೊಂದಿಗಿನ ಯುದ್ಧದ ಬಳಿಕ ಫಿಲಿಪೀನ್ಸ್ ಮತ್ತು ಗ್ವಾಮ್‍ಗಳನ್ನು ಪಡೆದುಕೊಂಡಿತು.

ಜರ್ಮನಿ 1899 ರಲ್ಲಿ ಸ್ಪೇನಿನಿಂದ ಕ್ಯಾರೊಲಿನ್, ಮಾರ್ಷಲ್ ಮತ್ತು ಮೇರಿಯಾನ ದ್ವೀಪಗಳನ್ನು ಕೊಂಡುಕೊಂಡ ಬಳಿಕ ಮೈಕ್ರೋನೇಷಿಯಾದ ಮೇಲೆ ಮುಖ್ಯ ಅಧಿಕಾರ ಗಳಿಸಿತು. ಜರ್ಮನಿ ಮಲನೇಷಿಯದಲ್ಲಿ ಬಿಸ್‍ಮಾರ್ಕ್ ದ್ವೀಪಕಲ್ಪವನ್ನು ಕೂಡ ತನ್ನ ಅಧಿಕಾರಕ್ಕೆ ಒಳಪಡಿಸಿಕೊಂಡಿತು. 1899 ರಲ್ಲಿ ಅಮೆರಿಕ ಕೆಲವು ದ್ವೀಪಗಳನ್ನು ವಶಪಡಿಸಿಕೊಂಡಿತು.
ಒಂದನೆಯ ಮಹಾಯುದ್ಧದ ಅನಂತರ ಪೆಸಿಫಿಕ್ ದ್ವೀಪಗಳಲ್ಲಿ ಅಧಿಕಾರ ಹಂಚಿಹೋಯಿತು. ಈ ವಲಯದಿಂದ ಜರ್ಮನಿಯನ್ನು ಸಂಪೂರ್ಣವಾಗಿ ಹೊರದೂಡಲಾಯಿತು. ಕ್ಯಾರೊಲಿನ್, ಮಾರ್ಷಲ್ ಮತ್ತು ಮೇರಿಯಾನ ದ್ವೀಪಗಳನ್ನು ಜಪಾನ್ ವಶಪಡಿಸಿಕೊಂಡಿತು. ಬಿಸ್‍ಮಾರ್ಕ್ ದ್ವೀಪಸ್ತೋಮ ಮತ್ತು ಸಾಲೊಮನ್ ದ್ವೀಪಗಳಲ್ಲಿ ಜರ್ಮನಿಯ ಅಧಿಕಾರದೊಳಗಿದ್ದ ವಲಯಗಳನ್ನು ಆಸ್ಟ್ರೇಲಿಯ ಪಡೆದುಕೊಂಡಿತು. ನ್ಯೂಜಿûಲೆಂಡ್ ಪಶ್ಚಿಮ ಸಮೋವವನ್ನು ಪಡೆಯಿತು. ಒಂದನೆಯ ಮಹಾಯುದ್ಧದ ಕಾಲದಲ್ಲಿ ದೂರದ ಶಾಂತಸಾಗರದಲ್ಲಿರುವ ದ್ವೀಪಗಳನ್ನು ರಕ್ಷಿಸಲು ಜರ್ಮನಿಗೆ ಅಸಾಧ್ಯವಾಯಿತು. ಎರಡನೆಯ ಮಹಾಯುದ್ಧದ ಸಮಯದಲ್ಲಿ ಅಮೆರಿಕ ಮತ್ತು ಬ್ರಿಟನ್‍ಗಳ ವಶದಲ್ಲಿದ್ದ ದ್ವೀಪಗಳನ್ನು ಜಪಾನ್ ಆಕ್ರಮಿಸಿತು. ಕೋರಲ್ ಸಮುದ್ರ ಮತ್ತು ಮಿಡ್‍ವೇ ದ್ವೀಪಗಳ ಬಳಿಯ ಕದನಗಳಲ್ಲಿ ಜಪಾನ್ ಪರಾಜಯಗೊಂಡಿತು. ಸಾಲೊಮನ್ ದ್ವೀಪಗಳ ಬಳಿಯ ನೌಕಾಕದನ ಭಯಂಕರವಾಗಿತ್ತು. ಇಲ್ಲೂ ಜಪಾನ್ ಸೋತಿತು. ಎರಡನೆಯ ಮಹಾಯುದ್ಧದ ಅಂತ್ಯದಲ್ಲಿ ತನ್ನ ಎಲ್ಲ ದ್ವೀಪಗಳನ್ನು ಅಮೆರಿಕ ಮತ್ತೆ ವಶಪಡಿಸಿಕೊಂಡಿತು.  ಬ್ರಿಟನ್ನೂ ತನ್ನ ದ್ವೀಪಗಳನ್ನು ಹಿಂದಕ್ಕೆ ಪಡೆಯಿತು. 
ವಿಶ್ವಸಂಸ್ಥೆಯ ಎರಡು ನ್ಯಾಸ ಪ್ರದೇಶಗಳು ಈಗ ಸ್ವತಂತ್ರವಾಗಿವೆ. ಅವು ಪಶ್ಚಿಮ ಸಮೋವ (1962) ಮತ್ತು ನಾವೂರೂ (1968). ಕುಕ್ ದ್ವೀಪಗಳು 19 5 ರಲ್ಲಿ ಸ್ವಾಯತ್ತಗೆ ಪಡೆದವು. ನೀಯು ಮತ್ತು ಟೋಕೆಲಾವುಗಳ ಮೇಲೆ ನ್ಯೂಜಿಲೆಂಡಿನ ನೇರ ಆಡಳಿತವಿದೆ. ಪಾಪ್ಯವ ಮತ್ತು ನ್ಯೂ ಗಿನಿ ಸ್ವತಂತ್ರವಾಗಿವೆ. ದಕ್ಷಿಣ ಪೆಸಿಫಿಕ್‍ನಲ್ಲಿ ಹರಡಿರುವ ಸಾಲೊಮನ್, ಗಿಲ್ಬರ್ಟ್, ಎಲಿಸ್ ಇವು ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟಿವೆ. ಸಮಭಾಜಕವೃತ್ತದ ಉತ್ತರಕ್ಕಿರುವ ದ್ವೀಪಗಳು ವಿಶೇಷವಾಗಿ ಅಮೆರಿಕದ ಪ್ರಭುತ್ವಕ್ಕೆ ಒಳಪಟ್ಟಿವೆ. ಹವೈಯ 1959 ರಲ್ಲಿ ಅಮೆರಿಕದ 50 ನೆಯ ರಾಜ್ಯವಾಯಿತು. ಅಮೆರಿಕನ್ (ಪೂರ್ವ) ಸಮೋವ, ಪೆಸಿಫಿಕ್ ದ್ವೀಪಗಳ ನ್ಯಾಸ ಪ್ರದೇಶ, ಗ್ವಾಮ್ ಇವುಗಳ ಆಡಳಿತ ಅಮೆರಿಕಕ್ಕೆ ಸೇರಿದೆ. ಫ್ರೆಂಚ್ ಪಾಲಿನೇಷಿಯ, ನ್ಯೂ ಕ್ಯಾಲಿಡೋನಿಯ ವಾಲಿಸ್ ಮತ್ತು ಫಟೂನ ದ್ವೀಪಗಳು ಫ್ರಾನ್ಸಿನ ಸ್ವತ್ತುಗಳು. ನ್ಯೂ ಹೆಬ್ರಿಡೀಸ್‍ನ ಮೇಲಿನ ಪ್ರಭುತ್ವದಲ್ಲಿ ಇದು ಬ್ರಿಟನ್ನಿನೊಂದಿಗೆ ಪಾಲ್ಗೊಂಡಿವೆ. ಈಗಿನ ಓಷಿಯಾನಿಯದ ಹೊರ ಎಲ್ಲೆಯಲ್ಲಿರುವ ಪಶ್ಚಿಮ ನ್ಯೂ ಗಿನಿ 1963 ರಲ್ಲಿ ಇಂಡೊನೇಷಿಯದ ಭಾಗವಾಯಿತು. ಈಗ ಇದಕ್ಕೆ ಇರೀಯಾನ್ ಬಾರಾತ್ (ಪಶ್ಚಿಮ ಇರೀಯಾನ್) ಎಂಬ ಹೆಸರಿದೆ. ಈಸ್ಟನ್ ದ್ವೀಪವನ್ನು 1888 ರಲ್ಲಿ ಚಿಲಿ ಪಡೆದುಕೊಂಡಿತು.
(ಜಿ.ಎಸ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ